ಬುಧವಾರ 25 ಎಪ್ರಿಲ್ 2012

ಕಾಣದ ಬದುಕಿಗೆ ಹಂಬಲಿಸಿದೆ ಮನ


ಮಿತ್ರರಿಬ್ಬರು ಅಂತರ್ಜಾಲದಲ್ಲಿ ಸಂಭಾಷಣೆಯನ್ನು ಮಾಡುತ್ತಿದರು.
ರಾಮ: ನಿನ್ನ ಬಳಿ ಏನೆಲ್ಲ ಇವೆ.
ಸೋಮ: ನನ್ನ ಬಳಿ    Gmail, Facebook, Twitter, Orkut, Yahooಹೀಗೆ ಎಲ್ಲವೂ ನನ್ನ ಬಳಿ ಇವೆ.
ರಾಮ: ನಿನ್ನ ಬದುಕು ನಿನ್ನ ಹತ್ತಿರವಿದೆಯಾ...?
ಸೋಮ: ಇಲ್ಲ, ಲಿಂಕ್ ಕಳುಹಿಸುತ್ತೀಯಾ ಪ್ಲೀಸ್...?
ಕನ್ನಡಪ್ರಭದ ಟ್ವಿಭಾಷಿತದಲ್ಲಿ ಬಂದದ್ದು..
ಓದುವಾಗ ಬಹಳ ಖುಷಿ ಕೊಡುತ್ತ ವಿಷಯ. ಆದರೆ ಇಂದಿನ ಪ್ರಪಂಚದ ವೇಗವನ್ನು, ಆಗು-ಹೋಗುಗಳನ್ನು ನೆನಪಿನಲ್ಲಿಟ್ಟು ಓದಿದರೆ ನಾವೆಲ್ಲಿದ್ದೇವೆ ಎನ್ನುವ ಸಂಗತಿ ಮನವರಿಕೆಯಾಗದೇ ಇರದು.
ನಮಗೆ ಜಗತ್ತಿನ ಜ್ಞಾನವೇ ಪ್ರಧಾನ. ಉಳಿದೆಲ್ಲವೂ ಗೌಣ. ಹಾಗಿರುವಾಗ ಕಂಪ್ಯೂಟರ್ ಯುಗದಲ್ಲಿರುವ ನಾವು ಅದರ ಕುರಿತೆ ನಮ್ಮ ಬುದ್ಧಿ, ಮನಸ್ಸು, ಕ್ರಿಯೆಗಳು ಹೊಂದಿಕೆಯಾಗಿ ಬಿಟ್ಟಿದೆ. ಎಲ್ಲಿ ನೋಡಿದರು ಅಲ್ಪವನ್ನು ಆಸ್ವಾದಿಸುವ ಅತಿವೇಗ. ನಾವು ಎಲ್ಲವನ್ನೂ ಅರಿಯಬೇಕು ಎನ್ನುವ ಅತಿಯಾದ ಆಸೆ ನಮ್ಮನ್ನೇ ಮರೆಸಿಬಿಡುತ್ತದೆ. ಯಾರ ಬದುಕಿನ ಬಗ್ಗೆ ಕೇಳಿದರೂ ಅದನ್ನು ನನಗೆ ಲಿಂಕ್ ಮಾಡು ಎನ್ನುವ ಮನಸ್ಥಿಗೆ ಬಂದು ನಿಂತಿದ್ದೇವೆ. ಬದುಕನ್ನು ಅಂತರ್ಜಾಲದಲ್ಲಿ ಅಡಕವಾಗಿಸಿದ್ದೇವೆ. ನೆಟ್ ಇಲ್ಲದೇ ದಿನ ಕಳೆಯುವುದು ನೆನಪಿಸಿಕೊಳ್ಳಲಾಗದಷ್ಟು ದೂರ ಹೋಗಿದ್ದೇವೆ.
ಒಂದು ಬಾರಿ ಯೋಚಿಸಿದಾಗ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವ ಅನುಮಾನ ಆಕ್ರಮಿಸಿಕೊಳ್ಳದೇ ಇರದು. ಪ್ರಪಂಚದೊಂದಿಗೆ ಬದುಕುವಾಗ ಕೆಲವು ಇಂತಹ ಚಟುವಟಿಕೆಗಳು ಬೇಕು. ಆದರೆ ಅದು ಚಟವಾದರೆ ಬದುಕು ಹಳಿ ತಪ್ಪಿದ ರೈಲಿನಂತೆ. ಎಲ್ಲಿಯೂ ಬೀಳಬಹುದು. ಅಂತರ್ಜಾಲವನ್ನು ಸಂಪರ್ಕ ಮಾಧ್ಯಮವಾಗಬೇಕು. ಅದು ಬಿಟ್ಟು ಬದುಕನ್ನೇ ಕಟ್ಟಿಕೊಳ್ಳಲು ಹೊರಟಿದ್ದೇವೆ.
ಜೀವನದ ಪ್ರಧಾನ ಘಟ್ಟ ವಿವಾಹ. ಅದನ್ನೂ ಹಾಳುಮಾಡಿಕೊಂಡು ವಿವಾಹವಾಗುವುದು ವಿಚ್ಚೇದನಕ್ಕಾಗಿ ಎನ್ನುವ ವರೆಗೆ ಬಂದು ನಿಂತಿದ್ದೇವೆ.
ಅಂದು ವಿವಾಹವನ್ನು ನಾಲ್ಕಾರು ಜನರ ಹಿರಿಯರ ಸಮ್ಮುಖದಲ್ಲಿ ನಡೆಸುತ್ತಿದ್ದರು. ಆದರಿಂದು ಅಂತರ್ಜಾಲದಲ್ಲಿ ಯಾರದ್ದೋ ಪ್ರೊಪೈಲ್ ನೋಡಿ ಬೆರಗಾಗಿ ವಿವಾಹವಾಗುತ್ತೇವೆ. ಅದು ಅವನ ಸತ್ಯದ ಬದುಕೋ ಅಥವಾ ಸತ್ಯದಂತೆ ತೋರುವ ಜೀವನವೋ ಪರೀಕ್ಷಿಸುವವರಾರು? ಯಾರದೋ ಚಿತ್ರ ಹಾಕಿ ಮಜ ನೋಡುವ ಎಷ್ಟೋ ಮಂದಿ ಜಾಲದಲ್ಲಿಲ್ಲದೇನಿಲ್ಲ. ಎಲ್ಲ ತಿಳಿದೂ ನಾವು ಬುದ್ಧಿಗೆ ಮಂಕು ಬಡಿದವರಂತೆ ವರ್ತಿಸುತ್ತೇವೆ.
ಕಾಣಲೇ ಬೇಕಾದ ಬದುಕೊಂದಿದೆ. ಅದು ನಮ್ಮದೇ ಬದುಕು. ಅದನ್ನು ಅಂತರ್ಜಾಲದಲ್ಲಿ ಹುಡುಕಿದರೆ ಏನೂ ಸಿಗಲಾರದು. ಅಂತರಂಗದಲ್ಲಿ ಕುಳಿತು ನಮ್ಮನ್ನು ಅವಲೋಕಿಸಿಕೊಳ್ಳಬೇಕು. ಎಲ್ಲಿ ಸಾಗುತ್ತಿದ್ದೇವೆ ಹಾಗೂ ಎಲ್ಲಿಗೆ ಸಾಗಬೇಕಿತ್ತು ಎನ್ನುವ ತುಲನಾತ್ಮಕ ಅಧ್ಯಯನ ನಾವೇ ಮಾಡಿಕೊಳ್ಳಬೇಕು. ಅದನ್ನಾರು ಲಿಂಕ್ ಕಳುಹಿಸಿ ಕೊಡಲಾರರು. ಅದಕ್ಕೇನದರೂ ಲಿಂಕ್ ಬೇಕಿದ್ದರೆ ಹಿರಿಯರನ್ನೇ ಕಾಣಬೇಕೇ ಹೊರತು ಮತ್ತಿನ್ನೆಲ್ಲೋ ಸಿಗದು..
 ಹಾಗಾಗಿ ಕಾಣದ ನೈಜ ಬದುಕಿಗೆ ಹಂಬಲಿಸಿ....
ಕಾಣುವ ನಿಜ, ನಿಜವಲ್ಲ....